ಚಂದ್ರವರ್ಮ-
ಸಮುದ್ರಗುಪ್ತನ ಅಲಹಾಬಾದ್ ಸ್ತಂಭಶಾಸನದಲ್ಲಿ ಉಲ್ಲೇಖಿತನಾದ ಒಬ್ಬ ಅರಸ. ಉತ್ತರಾಪಥದಲ್ಲಿ ನಿರ್ಮೂಲ ಮಾಡಲ್ಪಟ್ಟ ಅರಸರಲ್ಲಿ ಇವನೂ ಒಬ್ಬ. ಆದರೆ ಈತ ಯಾರೂ ಎಂಬುದನ್ನು ಖಚಿತವಾಗಿ ಗುರುತಿಸಲಾಗಿಲ್ಲ. ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಸುಸುನಿಯಾ ಎಂಬಲ್ಲಿ ದೊರೆತ ಶಾಸನವೊಂದರಲ್ಲಿ ಚಂದ್ರವರ್ಮನೆಂಬ ಅರಸನ ಉಲ್ಲೇಖವಿದೆ. ಸಮುದ್ರಗುಪ್ತನಿಂದ ಸೋಲಿಸಲ್ಪಟ್ಟ ಅರಸ ಈತನೇ ಇರಬಹುದೆಂದು ಊಹಿಸಲಾಗಿದೆ. ಆದರೆ ಈತನನ್ನು ಕುರಿತ ಇತರ ವಿವರಗಳು ತಿಳಿದಿಲ್ಲ.

ಕರ್ನಾಟಕದಲ್ಲಿ ಕ್ರಿ.ಶ. 6-7ನೆಯ ಶತಮಾನಗಳಲ್ಲಿ ಪಶ್ಚಿಮ ಕರಾವಳಿಯ ಕೊಂಕಣ ಪ್ರದೆಶದಲ್ಲಿ ಮೌರ್ಯವಂಶಕ್ಕೆ ಸೇರಿದ ಕೆಲವು ಅರಸರು ಆಳುತ್ತಿದ್ದುದು ಇತ್ತೀಚೆಗೆ ಲಭ್ಯವಾದ ಅವರ ಶಾಸನಗಳಿಂದ ತಿಳಿದಿದೆ. ಅವರಲ್ಲಿ ಚಂದವರ್ಮ ಒಬ್ಬ. ಭಗ್ನತಟಾಕವ್ಯಾಘ್ರ ಪಾಷಾಣಪರ್ಯಾಪ್ತವಾದ ಭೂಮಿಯನ್ನು ದಾನಮಾಡಿದನೆಂದು ಚಂದ್ರವರ್ಮನ ಆಳ್ವಿಕೆಯಲ್ಲಿ 2ನೇ ವರ್ಷದ ಶಿವಪುರ ತಾಮ್ರಶಾಸನದಲ್ಲಿ ಹೇಳಿದೆ. ಮೊಟ್ಟ ಮೊದಲು ಇವನ ತಾಮ್ರಶಾಸನವನ್ನು ಪ್ರಕಟಿಸಿದ ದಿವಂಗತ ಎ.ಜಿ. ದಿಕ್ಷಿತರು ಇವನ ಕದಂಬವಂಶಕ್ಕೆ ಸೇರಿದವನಾಗಿರಬಹುದೆಂದು ಊಹಿಸಿದರು. ಆದರೆ ಆನಂತರ ಡಾ.ಡಿ.ಸಿ. ಸರ್ಕಾರರು ಶಾಸನ ಪಾಠವನ್ನು ಮೌರ್ಯ ಎಂದು ಸರಿಯಾಗಿ ಓದಿ, ಕೊಂಕಣದಲ್ಲಿ-ಶಾಸನದಲ್ಲಿ ಉಲ್ಲೇಖವಾದ ಪ್ರದೇಶದಲ್ಲಿ-ಮೌರ್ಯವಂಶದ ಅರಸರು ಆಳುತ್ತಿದ್ದರು. ಇದೇ ವಂಶಕ್ಕೆ ಸೇರಿದ ಅನಿರ್ಜಿತವರ್ಮನೆಂಬ ಇನ್ನೊಬ್ಬ ವರ್ಮನೆಂಬ ಇನ್ನೊಬ್ಬ ಅರಸನ ತಾಮ್ರಶಾಸನವೊಂದು ಇತ್ತೀಚೆಗೆ ದೊರೆತಿದೆ. ಇದು ಚಂದ್ರವರ್ಮನ ಶಾಸನದ ಆನಂತರ ಹುಟ್ಟಿದ ಶಾಸನವೆಂದು ಲಿಪಿಯ ಆಧಾರದ ಮೇಲೆ ಹೇಳಲಾಗಿದೆ. ಆದರೆ ಇವರ ನಡುವಣ ಸಂಬಂಧ ಎಂಥದೆಂಬುದು ತಿಳಿಯದು. ಇದೇ ಕಾಲದಲ್ಲಿ ಇಲ್ಲಿ ಭೋಜ ಮನೆತನದ ಕೆಲವು ಅರಸರು ಆಳುತ್ತಿದ್ದರೆಂಬುದು ಅವರ ಶಾಸನಗಳಿಂದ ತಿಳಿದಿದೆ. ಬಹುಶಃ ಈ ಅರಸರನ್ನು ಮೌರ್ಯರು ಓಡಿಸಿ ಈ ಪ್ರದೇಶದಲ್ಲಿ ತಮ್ಮ ರಾಜ್ಯವನ್ನು ಸ್ಥಾಪಿಸಿರಬಹುದು. ಚಂದ್ರವರ್ಮನಿಗೆ ಈ ಯಶಸ್ಸು ಸಲ್ಲುತ್ತದೆಂದು ಹೇಳಲಾಗದು.                        				(ಜಿ.ವಿ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ